ಟೆಲಿಗ್ರಾಫ್ ಗಿಡ
 
ಲೆಗ್ಯೂಮಿನೋಸೀ ಕುಟುಂಬಕ್ಕೆ ಸೇರಿದ ಬಹು ವಾರ್ಷಿಕ ಸಸ್ಯ. ಡೆಸ್ಮೋಡಿಯಮ್ ಮೋಟಾರಿಯಮ್ ಇದರ ವೈಜ್ಞಾನಿಕ ಹೆಸರು. ಇದರ ತವರು ಏಷ್ಯದ ಉಷ್ಣಪ್ರದೇಶಗಳು, ಶ್ರೀಲಂಕಾ, ಫಿಲಪೀನ್ಸ್ ಹಾಗೂ ಭಾರತಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಭಾರತದ ಸಿಕ್ಕಿಮ್, ಡೆಹ್ರಾಡೂನ್, ಅಸ್ಸಾಮ್, ಬಂಗಾಳ, ಕರ್ನಾಟಕ ಮುಂತಾದೆಡೆಗಳ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಇದು ಕಂಡುಬರುವುದು.

	ಇದು 60-120 ಛಿm. ಎತ್ತರ ಬೆಳೆಯುವ ಪೊದೆಸಸ್ಯ. ಎಲೆಗಳು ಸಂಯುಕ್ತ ಮಾದರಿಯವು ; ಪರ್ಯಾಯ ರೀತಿಯಲ್ಲಿ ಜೋಡಣೆಗೊಂಡಿವೆ. ಒಂದೊಂದು ಎಲೆಯಲ್ಲೂ 3 ಕಿರು ಎಲೆಗಳಿವೆ ; ಇವುಗಳಲ್ಲಿ ಮಧ್ಯಭಾಗದ್ದು ದೊಡ್ಡದು. ಆಚೀಚಿನವು ಬಲು ಕಿರಿಯಗಲದವು. ವಾತಾವರಣದ ಉಷ್ಣತೆ 220 ಛಿ.ಗಿಂತ ಕಡಿಮೆ ಇರದಿದ್ದಾಗ ಪಾಶ್ರ್ವದ ಕಿರು ಎಲೆಗಳು ನಿಧಾನವಾಗಿ ದೀರ್ಘವೃತ್ತಾತ್ಮಕ ಕಕ್ಷೆಯಲ್ಲಿ ಸುತ್ತುತ್ತವೆ. ಹೂಗಳು ಊದಾ ಇಲ್ಲವೆ ನೇರಿಳೆ ಬಣ್ಣದವು ; ರೆಸೀಮ್ ಅಥವಾ ಪ್ಯಾನಿಕಲ್ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಹೂ ಬಿಡುವುದು ಮಳೆಗಾಲದಲ್ಲಿ.
	
ಟೆಲಿಗ್ರಾಫ್ ಗಿಡವನ್ನು ಅಲಂಕಾರಕ್ಕಾಗಿ ಬೆಳೆಸುವುದುಂಟು. ಬೀಜಗಳ ಮೂಲಕ ವೃದ್ಧಿಸಲಾಗುತ್ತದೆ. ಬೀಜವೃದ್ಧಿಗೆ ಮರಳುಮಿಶ್ರಿತ ಗೋಡು ಅತ್ಯುತ್ತಮ. ಫೆಬ್ರುವರಿ ತಿಂಗಳಲ್ಲಿ ಕುಂಡಗಳಲ್ಲಿ ಬೀಜಬಿತ್ತಿ ಉಷ್ಣತೆ ಹೆಚ್ಚಾಗಿರುವ ಸ್ಥಳಗಳಲ್ಲಿ ಇಡಬೇಕು. ಎಲೆಗೊಬ್ಬರ ಮತ್ತು ಗೋಡುಮಣ್ಣಿನ ಮಿಶ್ರಣವನ್ನು ಹಾಕುತ್ತಿರಬೇಕು. ಇದು ಬಹುವಾರ್ಷಿಕ ಸಸ್ಯವಾದರೂ ತೋಟಗಾರಿಕೆಯಲ್ಲಿ ಏಕವಾರ್ಷಿಕದಂತೆ ನೋಡಿಕೊಳ್ಳಲಾಗುತ್ತದೆ. ಇದನ್ನು ಹಸಿರು ಗೊಬ್ಬರವಾಗಿಯೂ ಒಣ ಮೇವಾಗಿಯೂ ಔಷಧಿ ಸಸ್ಯವಾಗಿಯೂ ಬಳಸುತ್ತಾರೆ.
(ಎಸ್.ಐ.ಎಚ್.; ಕೆ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ